Dakshina Kannada district, Karnataka
ಶ್ರೀ ಅನಂತನಾಥಸ್ವಾಮಿ ಜಿನ ಚೈತ್ಯಾಲಯ, ಕಾವಳಕಟ್ಟೆ
ಈ ಬಸದಿಯ ಹೆಸರು ಶ್ರೀ ಅನಂತನಾಥಸ್ವಾಮಿ ಜಿನ ಚೈತ್ಯಾಲಯ, ಕಾವಳಕಟ್ಟೆ, ಇದು ಬಂಟ್ವಾಳ ತಾಲೂಕು, ಕಾವಳ ಮೂಡೂರು ಗ್ರಾಮ ಕಾವಳಕಟ್ಟೆ ಊರಿನಲ್ಲಿದೆ. ಬಸದಿಯ ಹತ್ತಿರ ಶಾಲೆ ಇದೆ. ಇದಕ್ಕೆ ಹತ್ತಿರದಲ್ಲಿರುವ ಇನ್ನೊಂದು ಬಸದಿ ಕಾಡಬೆಟ್ಟು ಬಸದಿ. ಅದು ಸುಮಾರು 6 ಕಿ.ಮೀ. ದೂರದಲ್ಲಿದೆ. ಕಾವಳಕಟ್ಟೆ ಬಸದಿಗೆ ಬಲ್ಲೋಡಿಗುತ್ತು, ಮಾಂಗಾಜೆ ಗುತ್ತು. ಅಲಂಪುರಿ ಗುತ್ತು, ಪಚ್ಚಾಜೆ ಗುತ್ತು ಹಾಗೂ ಇನ್ನಿತರ ಕುಟುಂಬದವರು ಆಗಾಗ ಬಸದಿಗೆ ಬರುತ್ತಾರೆ. ಇದು ಕಾರ್ಕಳ ಮಠಕ್ಕೆ ಸೇರಿದೆ. ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವ ಮುಖ್ಯರಸ್ತೆಯು ಇದರ ಸರಿಯಾದ ದಾರಿ. ಬಸದಿ ಹಂಚಿನ ಮಾಡಿನದ್ದಾಗಿದೆ. ಈಗ ಈ ಬಸದಿಯನ್ನು ಊರಿನವರು ನಡೆಸುತ್ತಿದ್ದಾರೆ. ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರು ಸನತ್ ಕುಮಾರ್ ರೈ ಬಲ್ಲೋಡಿಗುತ್ತು. ಇತರ ಪ್ರಮುಖ ಸದಸ್ಯರು ಪದ್ಮಶೇಖರ್ ಜೈನ್, ಜಿನರಾಜ ಆರಿಗ, ಮಾಣಿಕ್ಯರಾಜ್, ದೀಪಕ್ ಕುಮಾರ್ ಬಸದಿಯ ಇಂದ್ರರ ಹೆಸರು ದಿವಾಕರ್ ಇಂದ್ರ.ಈ ಬಸದಿಯನ್ನು 302 ವರ್ಷಗಳ ಹಿಂದೆ ಚಂದಯ್ಯ ಇಂದ್ರ ಕಟ್ಟಿಸಿದ್ದರೆಂದು ಹೇಳುತ್ತಾರೆ. ಆ ಮನೆತನದವರು ಈಗ ಎಲ್ಲಿದ್ದಾರೆಂದು ಗೊತ್ತಿಲ್ಲ, ಬಸದಿ 4 ವರ್ಷಗಳ ಹಿಂದೆ ಶ್ರೀ ಧರ್ಮಸ್ಥಳ ಟ್ರಸ್ಟ್ ಹಾಗೂ ಊರು ಹಾಗೂ ಪರವೂರಿನ ವರಿಂದ ಜೀರ್ಣೋದ್ಧಾರಗೊಂಡಿದೆ. ಶ್ರೀ ಪದ್ಮಾವತೀ ಅಮ್ಮನವರ ಮೂರ್ತಿ ಇದೆ. ಬ್ರಹ್ಮದೇವರ ಮೂರ್ತಿ.ಎದುರಿಗೆ ದ್ವಾರಪಾಲಕರ ಚಿತ್ರಗಳಿವೆ. . ಧರ್ಮಕ್ಕೆ ಸಂಬಂಧಪಟ್ಟ ಚಿತ್ರಗಳಿವೆ. ಪ್ರಾರ್ಥನಾ ಮಂಟಪದಲ್ಲಿ ಜಯಘಂಟೆ, ಜಾಗಟೆಗಳನ್ನು ತೂಗು ಹಾಕಲಾಗಿದೆ. ಮುಂದಿನ ಮಂಟಪದಲ್ಲಿ ಗಂಧಕುಟಿಯಿದೆ. ಅದರ ಬಳಿಯಲ್ಲಿ ಗಣಧರ ಪಾದ, ಶ್ರುತ ಇತ್ಯಾದಿ ಪೂಜಾಬಿಂಬಗಳಿದ್ದು ಅವುಗಳಿಗೆ ಪೂಜೆ ನಡೆಯುತ್ತದೆ.
ಪದ್ಮಾವತೀ ದೇವಿಯ ಬಿಂಬಕ್ಕೆ ಸೀರೆ ಉಡಿಸಿ, ಬಳೆಗಳನ್ನು ಹಾಕಿ. ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಮೂರ್ತಿ ಉತ್ತರಕ್ಕೆ ಮುಖ ಮಾಡಿಕೊಂಡಿದೆ. ಕುಕ್ಕುಟ ಸರ್ಪ ಇದೆ. ಅಮ್ಮನವರಿಗೆ ಹೂ ಹಾಕಿ ನೋಡುವ ಕ್ರಮವಿದೆ. ಕೆಲವು ವರ್ಷಗಳ ಹಿಂದೆ ಕಳ್ಳನ್ನು ಬಸದಿಯನ್ನು ಪ್ರವೇಶಿಸಿದಾಗ ಎಲ್ಲಾ ಮೂರ್ತಿಗಳನ್ನು ಕದ್ದು ಕೊನೆಗೆ ಅವನು ಪದ್ಮಾವತೀ ಅಮ್ಮನವರ ಮೂರ್ತಿಯನ್ನು ಕದಿಯಲು ಹೊರಟಾಗ ಅವನ ಕೈಗಳು ಮೂರ್ತಿಯ ಬಳಿ ಹೋಗಲಿಲ್ಲ. ಅವನು ತುಂಬಾ ಭಯಗೊಂಡ. ಮನಸ್ಸು ಅವೇಶಗೊಂಡು ಅವನ ಮೈ ನಡುಗಲು ಶುರುವಾಯಿತು. ಆದ್ದರಿಂದ ಕಳ್ಳನೇ ಸ್ವತಃ ಒಪ್ಪಿಕೊಂಡ. ಆನಂತರ ಎಲ್ಲಾ ಮೂರ್ತಿಗಳು ಸಿಕ್ಕಿದ್ದವು. ಜಿನಬಿಂಬಗಳ ಪೀಠಗಳ ಮೇಲೆ ಯಾವುದೇ ಬರವಣಿಗೆಯಿಲ್ಲ.
ಮೂಲ ನಾಯಕ ಮೂರ್ತಿ ಶಿಲೆಯದ್ದಾಗಿದ್ದು, ಸುಮಾರು 2.5 ಅಡಿ ಎತ್ತರವಿದೆ. ಖಡ್ಡಾಸನ ಭಂಗಿಯಲ್ಲಿದೆ. . ದಿನವೂ ಕ್ಷೀರಾಭಿಷೇಕ. ಪಂಚಾಮೃತ ಅಭಿಷೇಕ, ಜಲಾಭಿಷೇಕ ಮಾಡಲಾಗುತ್ತದೆ. ಮೂರ್ತಿಗೆ ವಜ್ರಲೇಪನ ಮಾಡಲಾಗಿದೆ. ಬೆಳಿಗ್ಗೆ, ಸಾಯಂಕಾಲ ಪೂಜೆ ನಡೆಯುತ್ತದೆ. ಕ್ಷೇತ್ರಪಾಲನ ಸನ್ನಿಧಿ ಇದೆ. ಅಲ್ಲಿ ನಾಗಕಲ್ಲುಗಳು, ಇತರ ಕೆಲವು ಕಲ್ಲುಗಳು ಹಾಗೂ ತ್ರಿಶೂಲವಿದೆ. ಇವೆಲ್ಲವನ್ನು ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಬಲಿಕಲ್ಲುಗಳಿವೆ. ಇವರಿಗೆ ಪೂಜೆ ಸಲ್ಲಿಕೆ ಆಗುತ್ತಿದೆ.
ಬಸದಿಯ ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆ: 9741426555