Dakshina Kannada district, Karnataka
ಶ್ರೀ ಚಂದ್ರನಾಥಸ್ವಾಮಿ ಬಸದಿ, ಕಾಡಬೆಟ್ಟು ಈ ಬಸದಿಯು ಬಂಟ್ವಾಳ ತಾಲೂಕು ಕಾಡಬೆಟ್ಟು ಗ್ರಾಮದಲ್ಲಿದೆ. ಬಸದಿಯ ಪಡುಭಾಗದಲ್ಲಿ ಕಾಡು ಇದೆ. ಹತ್ತಿರದಲ್ಲಿ ಕಾಡಬೆಟ್ಟು ಗುತ್ತು ಮನೆ ಇದೆ ಹಾಗೂ ಆವರಣದಲ್ಲಿ ಬಸದಿಯ ಬಾವಿ ಇದೆ. ಇದಕ್ಕೆ ಹತ್ತಿರದಲ್ಲಿರುವ ಬಸದಿಗಳು ಅಜ್ಜಿಬೆಟ್ಟು ಬಸದಿ 4 ಕಿ.ಮೀ., ಕಾವಳಕಟ್ಟೆ ಬಸದಿ 4 ಕಿ.ಮೀ.. ಅಲಂಪುರಿ ಬಸದಿ 3 ಕಿ.ಮೀ.. ಪಂಜಿಕಲ್ಲು ಬಸದಿ 4 ಕಿ.ಮೀ. ದೂರದಲ್ಲಿದೆ. ಇದು ಕಾಡಬೆಟ್ಟುಗುತ್ತಿನ ಕುಟುಂಬಸ್ಥರ ಸ್ವಂತ ಬಸದಿ. ಊರಲ್ಲಿ 6 ಶ್ರಾವಕರ ಮನೆಗಳಿವೆ. ಬಸದಿಯು ಕಾರ್ಕಳ ಮಠಕ್ಕೆ ಸೇರಿದುದು. ಬಸದಿಯು ಹಂಚಿನ ಮಾಡಿನದ್ದಾಗಿದೆ. ಶ್ರೀ ಕೆ. ರಾಜವರ್ಮ ಆದ್ರೆ, ಕಾಡಬೆಟ್ಟು ಗುತ್ತು ಇವರು ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರು, ಶ್ರೀ ಮಹಾವೀರ ಜೈನ್ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ಶ್ರೀಗಳಾದ ಸತೀಶ್ ಕುಮಾರ್ ಪಿಲಿಂಗಲ್ಲು, ನವೀನ್ ಕುಮಾರ್ ಮಿಜಾರ್, ಶಾಂತಿಪ್ರಸಾದ್ ಜೈನ್ ಮಯಾದೊಟ್ಟು ಗುತ್ತು, ರಂಜಿತ್ ಕುಮಾರ್ ಜೈನ್ ಮೇಗಿನ ಕಾಡಬೆಟ್ಟು, ಕಿಶೋರ್ ಕುಮಾರ್ ಎರ್ಮೆದೋಡಿ. ಶ್ರೀ ವಿದ್ಯಾಧರ ಇಂದ್ರರೂ ಪೂಜೆ ಮಾಡುತ್ತಾರೆ. ಕಾಡಬೆಟ್ಟು ಗುತ್ತಿನ ಹಿರಿಯವರಾದ ಶ್ರೀಮತಿ ದೇವಮ್ಮ ಹೆಂಗ್ಲು ಎಂಬವರು ಈ ಬಸದಿಯನ್ನು ಕಟ್ಟಿಸಿದರೆಂದು ಹೇಳುತ್ತಾರೆ. ಆ ಮನೆಯ ವಂಶಸ್ಥರೇ ಕಾಡಬೆಟ್ಟು ಗುತ್ತಿನಲ್ಲಿದ್ದುಕೊಂಡು ನಡೆಸಿಕೊಂಡು ಬರುತ್ತಿದ್ದಾರೆ. ಈ ಬಸದಿಯು ಜೀರ್ಣೋದ್ಧಾರಗೊಂಡು, ದಿನಾಂಕ 25-04-2009 ರಿಂದ 29-04-2009ರವರೆಗೆ ಪುನರ್ ಪ್ರತಿಷ್ಟಾ ಕಾರ್ಯಕ್ರಮ ನಡೆದಿದೆ. ದೇವರ ಮೂಲಬಿಂಬದ ಪೀಠದಲ್ಲಿ ಈ ರೀತಿ ಬರಹವಿದೆ- "ಶ್ರೀ ಸ್ವಸ್ತಿ ಶ್ರೀಮಾನ್ ಶಾಲಿವಾಹನ ಶಖ ವರುಶ ೧೭೫೮ನೇ ವರ್ಧಮಾನ ಕೈ ಸಲುವ ಋಮುಖಿ ನಾಮ ಸಂವತ್ಸರದ ಫಾಲ್ಗುಣ ಶು. ೧೦ ಯು ಗುರುವಾರ ದೆವಂಮಪದುಮ ಶ್ಫ್ರಾ ಖ್ ಕಾಡಬೆಷ್ಟು ಬಸ್ತಿ ಕಪ್ಪಿಸಿ ಚಂದ್ರಪ್ರಭ ಶಿಯರ್ಥಕರ ಪ್ರತಿಷ್ಟೆ ಶುಬ ಮಸ್ತು" ಇದರ ಅನುಸಾರ 1826ನೇ ಇಸವಿಯಲ್ಲಿ ಈ ಬಸದಿಯನ್ನು ನಿರ್ಮಾಣ ಮಾಡಲಾಗಿದೆ ಮತ್ತು ಇದಕ್ಕೆ 150 ಮುಡಿ ಗದ್ದೆಯನ್ನು ಬಸದಿಗೆ ಎಂದು ಬರೆದು ಕೊಟ್ಟಿದ್ದರು. . ಚವೀಷ ತೀರ್ಥಂಕರರು, ಶ್ರೀ ಅನಂತನಾಥ ತೀರ್ಥಂಕರರು, ಭಗವಾನ್ ಬಾಹುಬಲಿ ಸ್ವಾಮಿ, ಸರ್ವಾಹ ಯಕ್ಷ, ಶ್ರೀ ಪಾರ್ಶ್ವನಾಥಸ್ವಾಮಿ, ಭೈರವಿ ಪದ್ಮಾವತೀ ಅಮ್ಮ ಮತ್ತು ಬ್ರಹ್ಮಯಕ್ಷನ ಮೂರ್ತಿಗಳು ಈ ಬಸದಿಯಲ್ಲಿ ಪೂಜೆಗೊಳ್ಳುತ್ತಿವೆ. . ಬಸದಿಯ ಪ್ರವೇಶದ್ವಾರದ ಎಡಬಲಗಳಲ್ಲಿರುವ ಗೋಪುರವನ್ನು ವಿಶೇಷ ಪೂಜೆ-ಪುರಸ್ಕಾರಗಳು ನಡೆಯುವಾಗ ಶ್ರಾವಕರಿಗೆ ಕುಳಿತುಕೊಳ್ಳಲು ಉಪಯೋಗಿಸಲಾಗುತ್ತದೆ ಹಾಗೂ ಎಲೆಕ್ಟಿಕಲ್ ಡೋಲು. ಗಂಟೆ ಇದೆ. ಪೂಜಾ ಸಮಯದಲ್ಲಿ ಇದನ್ನು ಬಾರಿಸಲಾಗುತ್ತದೆ.
ಪ್ರವೇಶದ್ವಾರದಲ್ಲಿ ದ್ವಾರಪಾಲಕರ ವರ್ಣಚಿತ್ರಗಳಿವೆ. ಆದರೆ ಶಿಲಾಮುರ್ತಿಯಿಲ್ಲ. ಎದುರಿನ ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇಲ್ಲ. ಆದರೆ ಜಯಘಂಟೆ, ಜಾಗಟೆಗಳನ್ನು ತೂಗು ಹಾಕಲಾಗಿದೆ. ಗಂಧಕುಟಿಯಲ್ಲಿರುವ ಗಣಧರಪಾದ, ಶ್ರುತ, ಬ್ರಹ್ಮದೇವರಿಗೆ ಹಾಗೂ ಸರ್ವಾಹ ಯಕ್ಷನಿಗೆ ಸದಾ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಮಾತೆ ಪದ್ಮಾವತಿಯಮ್ಮ ಭೈರವಿ ಪದ್ಮಾವತಿಯಮ್ಮ ಎಂಬ ರೂಪದಲ್ಲಿದ್ದು, ದಿನಾಲೂ ಪೂಜೆ ನಡೆಯುತ್ತದೆ. ದಿನಾಲೂ ಸೀರೆ ಉಡಿಸಿ, ಬಳೆಗಳನ್ನು ಹಾಕಲಾಗುತ್ತದೆ. ಆದರೆ ವಿಶೇಷ ಅಲಂಕಾರ ಮಾಡುವುದಿಲ್ಲ. ಅಮ್ಮನವರಿಗೆ ಬೆಳ್ಳಿ ಕವಚ ಇದೆ. ಬಸದಿಯ ಮುಖ ಉತ್ತರಕ್ಕಿದೆ ಹಾಗೂ ಅಮ್ಮನವರ ಮೂರ್ತಿಯೂ ಉತ್ತರಾಭಿ ಮುಖವಾಗಿದೆ. ಕಾಲಬಳಿ ಕುಕ್ಕುಟ ಸರ್ಪವಿದೆ. ಮದುವೆ ಸಂಬಂಧ ದೇವರ ಒಪ್ಪಿಗೆ ನೋಡಲು ಹೂ ಹಾಕಿ ನೋಡುವ ಕ್ರಮ ಇದೆ. ಅನಂತರ ಪ್ರಸಾದ ಪಡೆಯಲಾಗುತ್ತದೆ. ಮೂಲಸ್ವಾಮಿಯ ಬಿಂಬ ಶಿಲೆಯದ್ದು 9 ಇಂಚು ಎತ್ತರ, ಖಡ್ಗಾಸನ ಭಂಗಿಯಲ್ಲಿದೆ. ಸುತ್ತಲೂ ಮಕರ ತೋರಣದ ಪ್ರಭಾವಳಿ ಇದೆ. ದಿನವೂ ಮೂಲಸ್ವಾಮಿಗೆ ಜಲಾಭಿಷೇಕ ಮಾಡಲಾಗುತ್ತದೆ. ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಹಣ್ಣು ಕಾಯಿ ಪೂಜೆ ಇತ್ಯಾದಿ ಹಾಗೂ ಇಷ್ಟದ ಆರಾಧನೆಗಳನ್ನು ಮಾಡಲಾಗುತ್ತದೆ. ಬಸದಿಯಲ್ಲಿ ಹಿಂದೆ ಎರಡು ಹೊತ್ತು ಪೂಜೆ, ಒಂದು ಹೊತ್ತು ನೈವೇದ್ಯ ಇಟ್ಟು ಪೂಜೆ ಮಾಡಲಾಗುತ್ತಿತ್ತು. ಬಸದಿಯು ಉತ್ತರಾಭಿಮುಖವಾಗಿದ್ದು, ಬಸದಿಯ ಬಲಬದಿ ಅಂದರೆ ಆಗ್ನೆಯ ದಿಕ್ಕಿನಲ್ಲಿ ಕ್ಷೇತ್ರಪಾಲ ಗುಡಿ ಹಾಗೂ ಸನ್ನಿಧಿ ಇದೆ. ಈ ಸಂಬಂಧ ತ್ರಿಶೂಲ, ನಾಗನ ಕಲ್ಲು ಇವೆಲ್ಲವನ್ನು ಒಂದು ಪೀಠದ ಮೇಲೆ ಸ್ಥಾಪಿಸಲಾಗಿದೆ. ಗುಡಿಯ ಹೊರಗೆ ಎಡಬದಿಯಲ್ಲಿ ಗುತ್ತಿನ ಕುಟುಂಬ ದೈವ ಹಾಗೂ ಗ್ರಾಮದೈವವಾದ ಪಂಜುರ್ಲಿ ದೈವದ ಸನ್ನಿಧಿ ಇದೆ.ಅದಕ್ಕೆ ದಿನವೂ ದೇವರ ಪ್ರಸಾದ ಪ್ರೋಕ್ಷಣೆ ಮಾಡಲಾಗುತ್ತದೆ. ಬಲಿಕಲ್ಲುಗಳು ಇವೆ. ಅದಕ್ಕೂ ಪೂಜೆ ನಡೆಸಲಾಗುತ್ತದೆ. ಬಸದಿಯ ಸುತ್ತಲೂ ಮುರಕಲ್ಲಿನ ಪ್ರಾಕಾರ ಗೋಡೆಯಿದೆ.. ನೀರಿಗೆ ಬಾವಿ ಕ್ಷೇತ್ರದಲ್ಲಿಯೇ ಇದೆ. ಕಾಡಬೆಟ್ಟು ಕುಟುಂಬದಲ್ಲಿ ನಾಲ್ಕು ವಿಭಾಗವಿದ್ದು, ಒಂದೊಂದು ವಿಭಾಗದವರು ನಿಶ್ಚಿತ ಹಣದ ಮೊತ್ತವನ್ನು ಬ್ಯಾಂಕಿನಲ್ಲಿಟ್ಟು, ಅದರಿಂದ ಬರುವ ಬಡ್ಡಿಯಲ್ಲಿ ಪೂಜೆ ನಡೆಸುತ್ತಿದ್ದಾರೆ.