Nerenki.com

Adinatha Swamy Basadi Bantwala

Dakshina Kannada district, Karnataka

ಭಗವಾನ್ ಶ್ರೀ 1008 ಆದಿನಾಥ ತೀರ್ಥಂಕರ ಬಸದಿ, ಬಂಟ್ವಾಳ ಭಗವಾನ್ ಶ್ರೀ ಆದಿನಾಥ ಸ್ವಾಮಿಯ ಈ ಬಸದಿಯು ಬಂಟ್ವಾಳ ತಾಲೂಕು, ಬಂಟ್ವಾಳ ಕಸಬಾದಲ್ಲಿರುವ ಬಸ್ತಿ ಪಡ್ಡು ಎಂಬಲ್ಲಿದೆ. ಇದರ ಬಳಿಯಲ್ಲಿಯೇ ನೇತ್ರಾವತಿ ನದಿ ಹರಿಯುತ್ತಿದೆ. ಇದಕ್ಕೆ ಹತ್ತಿರವಾದ ಇನ್ನೊಂದು ಬಸದಿ ಯೆಂದರೆ ಸುಮಾರು 3 ಕಿ.ಮೀ. ದೂರವಿರುವ ಪಾಣೆ ಮಂಗಳೂರಿನ ಶ್ರೀ 1008 ಆನಂತಸ್ವಾಮಿ ಬಸದಿ. ಮೂಡಬಿದಿರೆ-ಬಿ.ಸಿ. ರೋಡ್ ಜೋಡುಮಾರ್ಗದಿಂದ ಬಂಟ್ವಾಳಕ್ಕೆ ಬರುವ ರಸ್ತೆಯಲ್ಲಿ ಬಸ್ತಿಪಡ್ಡು ಎಂಬ ಸ್ಥಳದಲ್ಲಿ ಈ ಬಸದಿ ಇದೆ. ಬಸದಿಯ ಒಳಭಾಗವು ಶಿಲಾಮಯವಾಗಿದ್ದು, ಮೇಗಿನ ನೆಲೆಗೆ ಹಂಚಿನ ಮಾಡು ಇದೆ.  ಶ್ರೀ ಆದಿನಾಥ ಸ್ವಾಮಿಯು ಪೂಜಿಸಲ್ಪಡುತ್ತಿದ್ದಾರೆ ಖಡ್ಗಾಸನ ಭಂಗಿಯಲ್ಲಿರುವ ಮೂಲಸ್ವಾಮಿಯ ಮೂರ್ತಿಯು ಪಂಚಲೋಹದ್ದಾಗಿದ್ದು, ಸುಮಾರು ಮೂರು ಆಡಿ ಎತ್ತರವಿದೆ. ಅಷ್ಟ ಮಹಾ ಪ್ರಾತಿಹಾರದ ಪ್ರಭಾವಳಿಯಲ್ಲಿ ಮೂಲಸ್ವಾಮಿಯ ಯಕ್ಷ-ಯಕ್ಷಿಯರಾದ ಗೋಮುಖ ಚಕ್ರೇಶ್ವರಿಯರನ್ನು ತೋರಿಸಲಾಗಿದೆ.   ಗಂಧ ಕುಟಿಯ ಅಂಕಣದಲ್ಲಿ ಪಂಚಲೋಹಗಳ 24 ತೀರ್ಥಂಕರರ ಮೂರ್ತಿಗಳಿವೆ.. ಪ್ರಾರ್ಥನಾ ಮಂಟಪದಲ್ಲಿ ದ್ವಾರಪಾಲಕರ ಚಿತ್ರಗಳು ರಚಿಸಲ್ಪಟ್ಟಿದೆ. ಗೋಡೆಯಲ್ಲಿ ಸಮ್ಮೇದಶಿಖರ್ಜಿ ಹಾಗೂ ಇತರ ತೀರ್ಥಕ್ಷೇತ್ರಗಳ ವರ್ಣಚಿತ್ರಗಳಿವೆ. ಘಂಟಾ ಮಂಟಪ ದಲ್ಲಿ ಜಯಘಂಟೆ, ಜಾಗಟೆಗಳನ್ನು ತೂಗಿ ಹಾಕಲಾಗಿದೆ. ಮುಂದೆ ತೀರ್ಥಮಂಟಪವಿದೆ. ಈ ಬಸದಿಯಲ್ಲಿ ಮಾತೆ ಪದ್ಮಾವತೀ ದೇವಿಯ (ಯಕ್ಷಿ) ಮೂರ್ತಿಗೆ ಪೂಜೆ ನಡೆಯುತ್ತಿದೆ. ಮಾತೆಗೆ ವಿಶೇಷ ಸಂದರ್ಭಗಳಲ್ಲಿ ಆಭರಣಗಳನ್ನು ತೊಡಿಸಿ ಹೂವಿನ ಅಲಂಕಾರದೊಂದಿಗೆ ಪೂಜೆ ನಡೆಸಲಾಗುತ್ತದೆ. ಅಮ್ಮನವರ ಮೂರ್ತಿ ಪಶ್ಚಿಮಕ್ಕೆ ಮುಖ ಮಾಡಿಕೊಂಡಿದೆ. ಮೂರ್ತಿಯ ಪಾದದ ಬಳಿ ಬೆಳ್ಳಿಯ ಕುಕ್ಕುಟ ಸರ್ಪವಿದೆ. ಲಕ್ಷ ಹೂವಿನ ಪೂಜೆ ಎಂಬ ವಿಶೇಷ ಹರಕೆ ಪೂಜೆಯ ಸಂದರ್ಭಗಳಲ್ಲಿ ಮಂಟಪವನ್ನು ಹೂವಿನಿಂದ ಶೃಂಗರಿಸಿ ಪೂಜೆ ಮತ್ತು ಹರಕೆಯ ಸೀರೆಗಳನ್ನು ಒಪ್ಪಿಸಲಾಗುತ್ತದೆ. ಮಾತೆ ಪದ್ಮಾವತೀ ಅಮ್ಮನವರಿಂದ ಅಪ್ಪಣೆ ಪಡೆಯುವ ಪದ್ಧತಿ, ಹೂ ಹಾಕಿ ನೋಡುವ ಕ್ರಮವಿದೆ. ಕಾರ್ಯಗಳು ನೆರವೇರುವ ಮುನ್ನ ಅಥವಾ ನೆರವೇರಿದ ನಂತರ ಪೂಜೆ ಮಾಡಿಸುವ ಕ್ರಮವಿದೆ. ದಿನವೂ ಮೂಲಸ್ವಾಮಿಗೆ ಜಲಾಭಿಷೇಕ ಮಾಡಲಾಗುತ್ತದೆ. ಬೇರೆ ಬೇರೆ ತೀರ್ಥಂಕರರ ನೋಂಪಿ ಪೂಜೆಗಳು ಆಚರಿಸಲ್ಪಡುತ್ತವೆ. ನವರಾತ್ರಿ ಪೂಜೆಯು ಶ್ರಾವಕರಿಂದ ಆಚರಿಸಲಾಗುವುದು. ಅಲ್ಲದೆ ವರ್ಧಮಾನ ಸ್ವಾಮಿಯು ನಿರ್ವಾಣ ಹೊಂದಿದ ದಿನ ದೀಪಾವಳಿಯಂದು ಆಶ್ವಿಜ ಚತುದರ್ಶಿಯ ಕೊನೆಯ ಜಾವದಲ್ಲಿ ಆರ್ಥ್ಯವನ್ನೆತ್ತುವ ಹಾಗೂ ದೀಪಾವಳಿ ನೋಂಪಿಯನ್ನು ಆಚರಿಸುವ ರೂಢಿಯಿದೆ. ಸಾಮಾನ್ಯವಾಗಿ ಬಸದಿಯಲ್ಲಿ ದಿನದಲ್ಲಿ ಎರಡು ಬಾರಿ ಪೂಜೆ ನಡೆಯುತ್ತದೆ. ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಲ್ಲದೆ ಯುಗಾದಿ. ನೂಲಹುಣ್ಣಿಮೆ, ಹುಣ್ಣಿಮೆ ನೋಂಪಿ, ನಾಗರಪಂಚಮಿ, ನವರಾತ್ರಿ ಪೂಜೆ, ವಿಜಯದಶಮಿಯಂದು ಮನೆತುಂಬಿಸುವ ಪೂಜೆ ಇಂತಹ ಆಚರಣೆಗಳು ನಡೆಯುತ್ತಿವೆ. ಬಸದಿಯ ಪ್ರಾಂಗಣದಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದ್ದು, ನಾಗಬ್ರಹ್ಮ, ನಾಗರಕಲ್ಲು, ತ್ರಿಶೂಲ ಇತ್ಯಾದಿಗಳನ್ನು ಒಂದೇ ಪೀಠದ ಮೇಲೆ ಪುನರ್‌ ಪ್ರತಿಷ್ಠಾಪಿಸಲಾಗಿದೆ. ಆಷ್ಪದಿಕ್ಷಾಲಕರ ಕಲ್ಲುಗಳಿವೆ ಹಾಗೂ ಇವುಗಳಿಗೆ ಪೂಜೆ ಸಲ್ಲಿಕೆಯಾಗುತ್ತದೆ. ಒಳಾಂಗಣ ದ್ವಾರದಲ್ಲಿ ಬೃಹದಾಕಾರದ ಆನೆಕಲ್ಲು ಇದೆ. ಬಸದಿಯ ಸುತ್ತಲೂ ಕರ್ಗಲ್ಲು ಮತ್ತು ಮುರಕಲ್ಲಿನಿಂದ ರಚಿಸಿದ ಭದ್ರವಾದ ಪ್ರಾಕಾರ ಗೋಡೆಯಿದೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಇದರ ಆಡಳಿತ ನಡೆಸುತ್ತಿದ್ದು, ಈ ಬಸದಿಯನ್ನು ಶ್ರೀ ಭಟ್ಟಾ ಹೆಗ್ಗಡೆ ಎಂಬವರು ಹಾಗೂ ಪಾಣೆಮಂಗಳೂರು ಬಸದಿಯನ್ನು ಅವರ ತಮ್ಮ ಜತ್ತಿ ಹೆಗ್ಗಡೆ ಎಂಬವರು ಕಟ್ಟಿಸಿದರೆಂಬ ಮಾಹಿತಿ ಇದೆ. ಇವರಿಬ್ಬರು ಅಣ್ಣ-ತಮ್ಮಂದಿರಾಗಿದ್ದರಂತೆ. 1967ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ಪೂಜ್ಯ ರತ್ನವರ್ಮ ಹೆಗ್ಗಡೆಯವರು ತಮ್ಮ ತಾಯಿ ಕಮಲಾವತಿ ಅಮ್ಮವನರ ಪ್ರೇರಣೆಯಂತೆ ಇದನ್ನು ಜೀರ್ಣೋದ್ಧಾರಗೊಳಿಸಿ 1969ರಲ್ಲಿ ವಿಜೃಂಭಣೆಯಿಂದ ಪಂಚಕಲ್ಯಾಣವನ್ನು ಕೈಗೊಂಡಿದ್ದರು. ಆ ಬಳಿಕ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಆದಿನಾಥ ಸ್ವಾಮಿಯ ನೂತನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪಂಚಕಲ್ಯಾಣವನ್ನು ನಡೆಸಿದ್ದಾರೆ.   ಬಸದಿಯ ಹೊರಾಂಗಣವನ್ನು ಪ್ರವೇಶಿಸುವಲ್ಲಿ ಪುರೋಹಿತರ ನಿವಾಸವಿದೆ. ಈ ಬಸದಿಯಲ್ಲಿ ಶ್ರೀ 108 ಜಂಬೂಸಾಗರ ಮುನಿ ಮಹಾರಾಜರು ತಂಗಿದ್ದು, ಮುನಿಗಳ ಭಿಕ್ಷಾ ಕಾರ್ಯಕ್ರಮ ನಡೆದಿತ್ತು. ಬಹುಸಂಭ್ರಮದಲ್ಲಿ ಬಂಟ್ವಾಳದ ಎಸ್.ವಿ.ಎಸ್. ಪ್ರೌಢ ಶಾಲೆಯ ವಠಾರದಲ್ಲಿ “ಕೇಶಲೋಚನ" ಕಾರ್ಯಕ್ರಮವು ಜರುಗಿತ್ತು. ಇವರಲ್ಲದೆ 108 ಶ್ರೀ ಏಲಾಚಾರ್ಯ ವಿದ್ಯಾನಂದ ಮುನಿಮಹಾರಾಜರು ಆಗಮಿಸಿದ್ದರು. ಶ್ರೀ 108 ವಿಶ್ವನಂದಿ ಮುನಿಮಹಾರಾಜರು ಒಂದು ವಾರ ತಂಗಿದ್ದು, ಭಿಕ್ಷಾ ಕಾರ್ಯ ಶ್ರಾವಕ-ಶ್ರಾವಕಿಯರಿಂದ ನಡೆದಿತ್ತು. ತದನಂತರ ಶ್ರೀ 108 ತರುಣಸಾಗರ ಮುನಿಗಳು ತಂಗಿದ್ದು, ಪ್ರವಚನ ಕಾರ್ಯಕ್ರಮವು ನಡೆದಿತ್ತು. ಇತ್ತೀಚೆಗೆ ಪ್ರಸಕ್ತ ಮುನಿಮಹಾರಾಜರಾಗಿರುವ ಪ್ರಮುಖ ಸಾಗರರು ಬಂದಿದ್ದರು. .

Reference : ಡಾ|| ವೈ. ಉಮಾನಾಥ ಶೆಣೈ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ಬಸದಿಗಳು,ಉಜಿರ: ಮಂಜುಶೀ ಪ್ರಿಂಟರ್ಸ್. p. 308


Deities & Specialities

Purohith

Pushparaj Indra

9480288006

  1. [object Object]